ವ್ಯಾಡ್
	ಸಾಮಾನ್ಯವಾಗಿ ಮೆದುವಾಗಿರುವ, ತೂಕವುಳ್ಳ, ಪುಡಿರೂಪದ, ಕಡುಕಂದು ಇಲ್ಲವೆ ಕಪ್ಪು ಬಣ್ಣದ ಖನಿಜ. ಪ್ರಧಾನವಾಗಿ ಮ್ಯಾಂಗನೀಸ್ ಆಕ್ಸೈಡುಗಳನ್ನೂ ಮತ್ತಿತರ ಖನಿಜಗಳನ್ನೂ ಒಳಗೊಂಡಿ ರುತ್ತದೆ. ಇದು ಭೂಮಿಯ ಕೆಲವು ನಿರ್ದಿಷ್ಟ ವಲಯಗಳಲ್ಲಿ ಮ್ಯಾಂಗನೀಸ್ ನಿಕ್ಷೇಪಗಳೊಡನೆ ಹರಕು ಮುರುಕಾಗಿ ವ್ಯಾಪಿಸಿಕೊಂಡಿದೆ. ಭಾರತದಲ್ಲಿ ಇದು ಸಾಮಾನ್ಯವಾಗಿ ಪೈರೊಲೂಸೈಟ್ ಸೈಲೋಮಲೀನ್ ಬ್ರಾನೈಟ್ ಮೊದಲಾದ ಮ್ಯಾಂಗನೀಸ್ ಆಕ್ಸೈಡುಗಳೊಡನೆ ಕೂಡಿಕೊಂಡು ದೊರೆಯುತ್ತದೆ. ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ರಾಮನದುರ್ಗ, ಉತ್ತರ ಕನ್ನಡ ಜಿಲ್ಲೆಯ ಕುಂಬೇಲಿ, ಹುಡ್ಸ, ಜೋಯಿಡ ಮೊದಲಾದ ಪ್ರದೇಶಗಳಲ್ಲೂ ಶಿವಮೊಗ್ಗ ಜಿಲ್ಲೆಯ ಕುಂಸಿ, ಬಿಕೋನಹಳ್ಳಿ ಮತ್ತು ತುಮಕೂರು ಜಿಲ್ಲೆಯ ಬುಲ್ಲೆಹಳ್ಳಿ ಮೊದಲಾದ ಸ್ಥಳಗಳಲ್ಲೂ ಮ್ಯಾಂಗನೀಸ್ ನಿಕ್ಷೇಪಗಳೊಡನೆ ಹೇರಳವಾಗಿ ದೊರೆಯುತ್ತದೆ. 

	ವ್ಯಾಡಿನ ನಿಜಸ್ವರೂಪ ಮತ್ತು ಖಚಿತ ರಾಸಾಯನಿಕ ರಚನೆ ಇನ್ನೂ ಸ್ಪಷ್ಟಪಟ್ಟಿಲ್ಲ. ಇದು ಜಲಯುಕ್ತವಾದ್ದು. ಆಕೃತಿರಹಿತ ಹಗುರ ಮಣ್ಣಿನ ರಾಶಿಗಳಂತೆ ಅಥವಾ ಬೊಕ್ಕೆ ಬೊಟ್ಟುಗಳ ತುಂಡುಗಳಂತೆ ವ್ಯಾಪಿಸಿದೆ. ವ್ಯಾಡ್‍ಖನಿಜ ಮ್ಯಾಂಗನೀಸ್ ಅಂಶವುಳ್ಳ ಶಿಲೆಗಳಲ್ಲಿ ರೇಖೆಗಳಂತೆಯೂ ಸಣ್ಣಪುಟ್ಟ ಮಡಿಗಳಂತೆಯೂ ಇರುತ್ತದೆ. ಹಲವು ಕಡೆ ಹೇರಳವಾಗಿ ದೊರೆಯುವುದು. ಇದು ಮೂಲ ಶಿಲೆಯ ಸ್ಲೇಟು ಇಲ್ಲವೆ ಪದರ ರಚನೆಯನ್ನು ಕೆಲವು ಕಡೆ ಉಳಿಸಿಕೊಂಡಿರುತ್ತದೆ.			
	(ಕೆ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ